Monday, February 15, 2010

ಗುರಿಯ ಹುಡುಕುವುದೇ ಗುರಿಯಾದಾಗ...




ರಸ್ತೆಬದಿಯಲ್ಲಿ ನಿಂತ ನಾಯಿಗೆ ತನ್ನ ಬಾಲದ ಮೇಲೆ ಕುಳಿತ ನೊಣವನ್ನು ಹಿಡಿದು ಜಜ್ಜಿ ಹಾಕುವ ಸಿಟ್ಟು ಬಂದಿದೆ.. ಬೊಗಳುತ್ತದೆ.. ಇಲ್ಲ.. ನೊಣ ಏಳುವುದಿಲ್ಲ.. ಬಾಯಲ್ಲಿ ಕಚ್ಚಿಬಿಡುವ ಆಲೋಚನೆ ಬರುತ್ತದೆ.. ನಾಯಿ ತನ್ನ ಬಾಲದ ತುದಿಯನ್ನು ಮುಟ್ಟಲು ತಿರುಗಿದೆ.. ಬಾಲ ಸಿಗುತ್ತಿಲ್ಲ.. ಇನ್ನು ಸ್ವಲ್ಪ ಎಡಕ್ಕೆ ತಿರುಗಿದೆ.. ಬಾಲವೂ ತಿರುಗುತ್ತದೆ.. ಮತ್ತೆ ತಿರುಗುತ್ತದೆ.. ಬಾಲವೂ ಜೊತೆಗೇ ತಿರುಗುತ್ತದೆ.. ತಿರುಗಿ ತಿರುಗಿ ಸುಸ್ತಾಗುತ್ತದೆ.. ನೊಣ ಅಷ್ಟರಲ್ಲಿ ಹಾರಿ ಹೋಗಿರುತ್ತದೆ.. ನಾಯಿಗೆ ತಾನೆಷ್ಟೋ ದೂರ ಕ್ರಮಿಸಿದ ಅನುಭವವಾಗುತ್ತದೆ.. ಆದರೆ ತನ್ನ ಜಾಗದಲ್ಲೇ ಇದ್ದದ್ದು ನೋಡಿ ಬೇಸರವಾಗುತ್ತದೆ..

ಪಕ್ಕದಲ್ಲಿ ತನ್ನದೇ ನೆರಳು ಕಾಣುತ್ತದೆ.. ಅದನ್ನು ಇನ್ಯಾವುದೋ ಪ್ರಾಣಿ ಎಂದು ತಿಳಿದು ಮತ್ತೆ ಬೊಗಳುತ್ತದೆ.. ಸ್ವಲ್ಪ ದೂರ ಸರಿದು ನಿಲ್ಲುತ್ತದೆ.. ಅದು ತನ್ನ ಬೆನ್ನಿಗೇ ಇರುವುದ ಕಂಡು ಭಯವಾಗುತ್ತದೆ.. ಹೆದರಿ ಹೆದರಿ ಓಡಲು ಪ್ರಾರಂಭಿಸುತ್ತದೆ.. ನೆರಳೂ ಅದನ್ನು ಬೆನ್ನಟ್ಟುತ್ತದೆ.. ನಾಯಿ ಇನ್ನೂ ಜೋರಾಗಿ ಓಡುತ್ತದೆ.. ರಸ್ತೆಯಲ್ಲಿ ಕರೆಂಟು ಹೋಗುತ್ತದೆ.. ಬೆಳಕಿಲ್ಲದ ರಾತ್ರಿಯಲ್ಲಿ ನೆರಳು ಮಾಯವಾಗುತ್ತದೆ.. ನಾಯಿಗೆ ಖುಷಿ.. ನೆರಳಿಂದ ತಪ್ಪಿಸಿಕೊಂಡ ಧನ್ಯತಾ ಭಾವ.. ಅದೇ ಸಂತೋಷದಲ್ಲಿ ಇಡೀ ದಿನವನ್ನು ಕತ್ತಲಲ್ಲೇ ಕಳೆಯುತ್ತದೆ..

ಮನುಷ್ಯ ಎಲ್ಲವನ್ನೂ ಬಯಸುತ್ತಾನೆ.. ತಾನಲ್ಲದ ಏನೋ ಒಂದು ಆಗಲು ಹೋಗಿ ಇನ್ನೇನೋ ಆಗಿ, ಕೊನೆಗೆ ಆಗಿದ್ದೆಲ್ಲವೂ ಇಲ್ಲವಾಗಿ ಏನೂ ಆಗದೆ ಉಳಿದುಬಿಡುತ್ತಾನೆ..ಗುರಿಯನ್ನು ಹುಡುಕುವುದೇ ಒಂದು ಗುರಿಯಾದಾಗ ಗುರಿ ಮುಟ್ಟುವುದು ಸಾಧ್ಯವೇ ಇಲ್ಲ.. ಅದು ತನ್ನ ಸುತ್ತಲೂ ಸುತ್ತುತ್ತಿರುವ ನಾಯಿಯಂತೆ.. ಅದೂ ನೊಣಕ್ಕಾಗಿ.. ಕೊನೆಯಲ್ಲಿ ಕ್ರಮಿಸುವುದು ಸೊನ್ನೆ..

ಈ ಸೊನ್ನೆಗೆ ಕಾರಣ ಹುಡುಕುತ್ತಾ, ಸಿಕ್ಕ ಕಾರಣಗಳಿಗೆಲ್ಲಾ ಇನ್ನೊಂದು ಕಾರಣ ಹುಡುಕಿ ಅದನ್ನು ಮರೆಮಾಚಿ, ಕೊನೆಗೆ ಅದಕ್ಕೇ ಹೆದರಿ ಓಡುವ ಪರಿಸ್ಥಿತಿ ಮತ್ತು ’ತಾನು ಗೆದ್ದಿದ್ದೇನೆ.. ತನ್ನ ಗುರಿತಲುಪಿದ್ದೇನೆ’ ಎಂಬ ಹುಂಬತನದ ಘೋಷಣೆಯೊಂದಿಗೆ ಕತ್ತಲೆಯಲ್ಲೇ ಜೀವನ ಕಳೆಯುವ ಬಾಳು ನಮ್ಮದಾಗದಿರಲಿ..






Thursday, February 4, 2010

ದಾರಿ ಇದೆ.. ಎಲ್ಲಿಗೆ? ಗೊತ್ತಿಲ್ಲ..



ಎಲ್ಲೋ ಕೆಳಗಡೆಯಿಂದ ಪ್ರಾರಂಭವಾಗಿ ಆಕಾಶದ ತುದಿಗೆ ಹತ್ತುವಂತಹ ದಾರಿ..ಆಕಾಶದ ಅನಂತದ ತುದಿಯಿಂದ ಕಲ್ಲುಗಳ ಜಲಪಾತವೊಂದು ಧುಮುಕುವ ಹಾಗೆ ಕಾಣುವ ದಾರಿ.. ಕೆಂಪು ಬಣ್ಣ ತುಂಬಿದ್ದರೂ ದೂರದ ನೀಲಿಯೊಡನೆ ಬೆರೆಯಲು ಪಯಣಿಸಬೇಕೆನ್ನಿಸುವಂತಹ ದಾರಿ.. ಸುತ್ತಲಿನ ಹಚ್ಚನೆಯ ಹುಲ್ಲುಗಳನ್ನೆಲ್ಲಾ ಬೇಧಿಸಿ ಗುರಿತಲುಪುವ ದಾರಿ.. ತನ್ನನ್ನು ಹತ್ತಲು ಬಳಸಬೇಕೋ ಅಥವಾ ಇಳಿಯಲು ಬಳಸಬೇಕೋ ಎಂದು ತಿಳಿಸದ ಹಾದಿ.. ಆ ಕಡೆ ಇರುವ ಅಲೌಕಿಕ ಸತ್ಯವನ್ನು ಮುಚ್ಚಿಟ್ಟು ಏನೋ ಸುಂದರವಾದದ್ದೇ ಇರಬಹುದು ಎಂಬ ಧನಾತ್ಮಕ ಕುತೂಹಲವನ್ನುಂಟುಮಾಡುವ ದಾರಿ.. ಬಾರಿ ಬಾರಿ ಗಿರಿ ಹತ್ತಿ ಇಳಿದು ಮಾಡಿದ ದಾರಿ..

ಚಿತ್ರ ನೋಡಿದಾಗ ಅನಿಸಿದ್ದೇನೆಂದರೆ ’ಈ ದಾರಿಯಲ್ಲಿ ಎಷ್ಟೋ ಜನ ಹತ್ತಿ ಹೋಗಿರಬೇಕು.. ಅಥವಾ ಇಳಿದು ಬಂದಿರಬೇಕು..’ ಹತ್ತಿ ಹೋದವರು ಎಲ್ಲಿಗೆ ಹೋದರು.. ನೇರ ಆಗಸಕ್ಕೋ ಅಥವಾ ಅಂಚಿನ ಪ್ರಪಾತಕ್ಕೋ? ಇಳಿದು ಬಂದವರು ದೇವತೆಗಳಾ.. ಅಥವಾ ಕೆಳಗೆ ಬಿದ್ದವರ ಪಳೆಯುಳಿಕೆಗಳು ಭೂತಗಳಾಗಿ ಎದ್ದು ಬಂದು ಇದೇ ದಾರಿಯಲ್ಲಿ ಕೆಳಗಿಳಿದರಾ? ಹಾದಿಪಕ್ಕದ ಕಳೆಗಳು ಜೀವಂತಿಕೆಯ ನಿಶಾನೆಗಳಂತಿರಬೇಕಾದರೆ ಶಿಲಾಪಥವೇಕೆ ಸತ್ತಂತಿದೆ? ಹಾಗೆ ಸತ್ತು ಜನರಿಗೆ ದಾರಿಯಾಗುವುದರಲ್ಲೇ ಜೀವಂತವಾಗಿರುವ ಲಕ್ಷಣ ತೋರುವ ಕಲ್ಲುಗಳು ಶ್ರೇಷ್ಠವೋ ಅಥವಾ ಕಣ್ತಂಪಿನ ಹಸಿರಿನಾವರಣ ಶ್ರೇಷ್ಠವೋ? ಅಥವಾ ಇದನ್ನೆಲ್ಲವನ್ನೂ ಮೀರಿ ಆವರಿಸಿರುವ ನೀಲಿಯ ಆಕಾಶವೋ? ಪ್ರಶ್ನೆಗಳನ್ನೂ ಕೇಳುತ್ತಲೇ ಇರಬಹುದು...

ಗುರಿಗೆ ನಿರ್ದಿಷ್ಟತೆಯಿದೆ.. ದಾರಿಗೆ ಕಾಠಿಣ್ಯವಿದೆ.. ಸುಖದ ಆವರಣವೂ ಇದೆ.. ದಾರಿ ತಪ್ಪಿ ಸುಖದ ಕಡೆ ಮನಸ್ಸು ಬಿದ್ದರೆ ಗುರಿ ಕಾಣುವುದಿಲ್ಲ.. ನಿರ್ದಿಷ್ಟತೆ ನಿರಂತರ ಮತ್ತು ಅನಂತ..ಎಲ್ಲಿಂದ ತಲುಪಿದರೂ ಅದರ ಒಂದಲ್ಲ ಒಂದು ತುದಿ ಸಿಕ್ಕೇ ಸಿಗುತ್ತದೆ.. ಆದರೆ ಅದರ ಬೆಲೆ ಹೆಚ್ಚುವುದು ಅದನ್ನು ತಲುಪುವ ದಾರಿಯ ಕಠಿಣತೆಯಿಂದ.. ಸುಖಕ್ಕೆ ಮೇರೆಯಿದೆ.. ಅದರ ನಡುವೆಯೇ ಕಾಠಿಣ್ಯವಿದೆ..ಗುರಿಯಲ್ಲಿರುವ ತೃಪ್ತಿ ಸುಖದಲ್ಲಿಲ್ಲ.. ಸುಖವನ್ನು ತುಳಿದು ದಾರಿ ಮಾಡಿದರೆ ಮಾತ್ರ ಗುರಿ ಮುಟ್ಟೂವುದು ಸಾಧ್ಯ..

ಇಲ್ಲಿ ನೀಲಿ ಗುರಿ.. ಕೆಂಪು ದಾರಿ.. ಹಸಿರು ಸುಖ..

Monday, February 1, 2010

ದೇವರ ತಲೆಮೇಲೆ..


ಕರಾವಳಿಯ ತೀರದಲ್ಲೊಂದು ಅಡಿಕೆ ತೋಟ.. ಅದರಲ್ಲೊಂದು ಅಡಿಕೆ ಮರ.. ಆ ಮರಕ್ಕೊಂದು ಹೂವು.. ಈಗ ತಾನೇ ಬಿಟ್ಟಿದ್ದಿರಬೇಕು.. ಹೊಂಬಾಳೆಯ ಕವಚ ತೊಟ್ಟು ಬೆಚ್ಚಗೆ ಮಲಗಿರಬೇಕು.. ತಟ್ಟನೆ ಎಚ್ಚರವಾಯಿತು.. ತೋಟದಲ್ಲಿ ಎರಡು ಜನ ನಿಂತು ಮಾತಾಡುತ್ತಿದ್ದಾರೆ..

’ನೋಡೋ ಸುಬ್ರಾಯ.. ಆ ಮರಕ್ಕಿದ್ಯಲ್ಲಾ.. ಆ ಸಿಂಗಾರ ಕೊಯ್ದು ಅಮ್ಮಾವ್ರಿಗೆ ತಕಂಡ್ ಹೋಗ್ ಕೊಡು..’

’ಆಯ್ತ್ರ.. ಹಾಂಗೇ ಮಾಡ್ತೆ..’

ಸಿಂಗಾರೆಳೆಗೆ ಮನಸ್ಸಲ್ಲೇ ಖುಶಿ.. ತಾನು ದೇವರ ತಲೆ ಏರಲಿದ್ದೇನೆ ಎಂದು..

ಸುಮಾರು ಹೊತ್ತಾಯ್ತು.. ಸುಬ್ರಾಯ ತನ್ನನ್ನು ಇನ್ನೂ ಕೊಯ್ಯಲೇ ಇಲ್ಲವಲ್ಲ.. ಅಂದುಕೊಳ್ಳುತ್ತಿರುವಾಗಲೇ ಅವನು ಇನ್ಯಾವುದೋ ಮರದಲ್ಲಿ ಬಿಟ್ಟ ಸಿಂಗಾರ ಕೊಯ್ದು ಮನೆ ಕಡೆ ಹೊರಟಿದ್ದ..

ನಿರಾಸೆಯಿಂದ ಮತ್ತೆ ಮಲಗಿತು ಅಡಿಕೆ ಹೂವು..

ದಿನಗಳು ಕಳೆದವು.. ಹೂವು ಹೊಂಬಾಳೆಯನ್ನು ಬಿರಿದು ಕಾಯಿಯಾಗುವ ಯೌವನದ ಘಟ್ಟದಲ್ಲಿ ಹೊರಗೆ ಬಂತು.. ಹೊರಗೆ ಸೂರ್ಯ ಕಂಡ.. ತಾನೂ ಸೂರ್ಯನಾಗಬೇಕೆಂದು ಅನಿಸಿತು..

ಎಲ್ಲಾ ಎಳೆಗಳಿಗೂ ಹಾಗೇ ಅನಿಸಿದ್ದರಿಂದ ಎಲ್ಲವೂ ಸೇರಿ ಹಚ್ಚನೆಯ ಕಿರಣಗಳಾಗಿ ನಿಂತುಬಿಟ್ಟವು.
ತುದಿಯಲ್ಲಿದ್ದ ಹೂವಿಗೆ ಅನಿಸಿತು.. ’ಸುಬ್ರಾಯ ಒಳ್ಳೇ ಕೆಲಸ ಮಾಡಿದ’.

Saturday, January 30, 2010

ನೀಲಿಯಲ್ಲಿ ಲೀನವಾದಾಗ


ಇಂದಿನ ಚಂದಿರ ದಿನಕ್ಕಿಂತಲೂ ಸುಂದರವಾಗಿದ್ದಾನೆ ಎಂದೆನಿಸಿದ್ದು ಇವತ್ತು ಮಾತ್ರವಲ್ಲ.. ನಿತ್ಯವೂ ಹಾಗೇ ಅನಿಸುತ್ತದೆ.. ಶುಕ್ಲಪಕ್ಷದ ಪ್ರಥಮದಂದು ಕಂಡೂ ಕಾಣದಂತೆ ಚಂದ್ರ ಅಡಗಿದರೆ, ಬಿದಿಗೆಯಲ್ಲಿ ರೇಖೆಯಾಗುತ್ತಾನೆ.. ಬೆಳೆದು ಬೆಳೆದು ಹುಣ್ಣಿಮೆಗೆ ಹಣ್ಣಾಗುವ ಹೊತ್ತಿಗೆ ಅವನಲ್ಲಿ ಒಂದು ರೀತಿಯ ಪ್ರೌಢಿಮೆ ಕಾಣುತ್ತದೆ.. ಒಂದು ಪ್ರಭಾವಳಿ ಮೂಡುತ್ತದೆ.. ಚಂದ್ರನ ಸುತ್ತ ಸಾವಿರ ಚಿಕ್ಕೆಗಳಿದ್ದರೂ ಅವು ಎಂದೂ ಸುಂದರವಾಗಿ ಕಾಣಿಸಿಲ್ಲ.. ಗಾಳಿ ಬಂದೆಡೆ ತೂರಾಡುವ ಬೆಳ್ಳಗಿನ ತೆಳ್ಳಗಿನ ಹಾಳೆಯಂತೆ ಬಾನಿನಲ್ಲಿ ತೇಲುವ ಚಂದಿರನಲ್ಲಿ ಕಲೆಗಳಿವೆ ಎಂಬುದು ಆ ಹೊತ್ತಿಗೆ ಮರೆತು ಹೋಗುತ್ತದೆ..

ಇಂದಿನ ಚಂದ್ರ ನೀಲಿಯಾಗಿದ್ದಾನಂತೆ?.. ಚಂದ್ರನೂ ಬಣ್ಣ ಬದಲಾಯಿಸುತ್ತಾನೆಯೇ? ಹೌದು.. ಅವನಿಗೆ ಭಯ.. ಬೆಳಗಾಗುತ್ತಲೇ ತೋಟಕ್ಕೆ ನುಗ್ಗಿದ ದನವನ್ನಟ್ಟಿದ ಹಾಗೆ ಬಾನಿನಿಂದಾಚೆ ಓಡಿಸಿಬಿಡುವ ಸೂರ್ಯನ ಭಯ.. ಚಂದ್ರನಿಗೂ ಬೆಳಗನ್ನು ಕಾಣಬೇಕು.. ರಾತ್ರಿ ಕಾರ್ಮಿಕನಂತೆ ಬಂದು ಹಗಲೆಲ್ಲಾ ನಿದ್ದೆ ಮಾಡಬಾರದು ಎಂದು ಎಷ್ಟೋ ಸಲ ಅನಿಸಿದೆ.. ಆದರೆ ಆ ಹಾಳು ರವಿ ಬರಗೊಡುವುದೇ ಇಲ್ಲಾ.. ಅದಕ್ಕೆ ಚಂದ್ರ ಈಗ ಯೋಚನೆ ಮಾಡಿದ್ದಾನೆ.. ನೀಲಿಯಾಗಿದ್ದಾನೆ..

ಅಕಾಶದ ನೀಲಿಯನ್ನು ತಾನೂ ಹೀರಿ ದಿಗಂತದೊಳಗೆ ಅಡಗುವ ಹುನ್ನಾರದಲ್ಲಿದ್ದಾನೆ.. ಬೆಳಗ್ಗೆ ಬಂದ ಸೂರ್ಯನ ಕಣ್ತಪ್ಪಿಸಿ ಈ ಲೋಕದ ಉತ್ಸಾಹವನ್ನು ಹೀರಿ ತಾನೂ ದಿನಕರನಂತೆ ಬೆಳಗುವವನಿದ್ದಾನೆ.. ನಿರ್ಧಾರ ಮಾಡಿಯಾಗಿದೆ.. ಇನ್ನು ಚಂದ್ರ ರಾತ್ರಿ ಬರುವುದಿಲ್ಲ.. ಅಕಾಶದಂತೆ ನೀಲಿಯಾಗಿ ಯಾರಿಗೂ ಕಾಣದೇ ಅನಂತದಲ್ಲಿ ಲೀನವಾಗುತ್ತಾನೆ.

ಊಟ ಮಾಡುವಾಗ ಚಂದಮಾಮ ಬೇಕೇ ಬೇಕು ಎಂದು ಮಗು ಹಠಮಾಡುತ್ತಿದೆ.. ರಾತ್ರಿ ನಕ್ಷತ್ರಗಳ ತೋರಿದರೆ ನಕ್ಷತ್ರಗಳಿಗಿಂತ ಹೊಳಪಿನ ತನ್ನ ಕಣ್ಣುಗಳಿಂದ ಜಲಧಾರೆ ಹರಿಸುತ್ತಿದೆ. ಅಮ್ಮ ಬೆಳಗಿನ ಸೂರ್ಯನನ್ನು ತೋರಿಸುತ್ತೇನೆ ಎಂದರೆ ಅದಕ್ಕೆ ಬೇಕಾಗಿಲ್ಲ.. ಚಂದ್ರನಿಗಿದು ಅರ್ಥವಾಗುತ್ತಿಲ್ಲ..

Wednesday, December 17, 2008

ದ್ವಂದ್ವ

ಇವು ಈಗ ತಾನೇ ಹೊರಬಂದ ಹೊಸ ಚಪ್ಪಲಿಗಳು.. ಅವು ಹೊಳೆಯುತ್ತವೆ.. ಗಂಭೀರತೆಯಲ್ಲಿ ರಾಜನ ಹೋಲಿಕೆಯಿದ್ದರೂ ಢಾಳಾಗಿ ಬೀಳುತ್ತಿರುವ ರುಧಿರವರ್ಣದಿಂದಾಗಿ ಖಳನಾಯಕನ ಕಳೆ.. ತಮ್ಮ ತಮ್ಮ ಬೆಲೆಪಟ್ಟಿಯನ್ನು ಐ.ಡಿ. ಕಾರ್ಡಿನಂತೆ ನೇತುಹಾಕಿಕೊಂಡ ಮೇಲೆ, ಈಗ ತಾನೇ ರಸ್ತೆಗಿಳಿದ ಹೊಸ ಸೇಲ್ಸ್ ಮನ್ ನ ಮುಖಚರ್ಯೆ ..

ಹೊಳೆಯುವ ನಿಯಾನ್ ದೀಪದ ಗಾಜಿನ ಅರಮನೆಯ ರಾಜ್ಯದಲ್ಲಿ ಮುಳುಗಿಬಿಟ್ಟಿವೆ.. ದಿನ ಬೆಳಗಾದರೆ ಜನ ಓಡಾಡುವ ರಸ್ತೆ ಪಕ್ಕದಲ್ಲೇ ಗಿಜಿಗುಡುತ್ತದೆ.. ಆದರೂ ಮೂಕಿಚಿತ್ರ ನೋಡಿದಂತೆ, ಏನೊಂದೂ ಕೇಳುವುದಿಲ್ಲ.. ಆ ಗಾಜಿನ ಪೆಟ್ಟಿಗೆ ಶಬ್ದ ನಿರೋಧಕ.. ತಾವು ಸುಖದಿಂದ ನಿದ್ರಿಸಲಿ ಎಂದು ತಮ್ಮೊಡೆಯ ಈ ರೀತಿ ವ್ಯವಸ್ಥೆ ಮಾಡಿದ್ದಾನೆ ಎಂದು ಖುಷಿಪಡುತ್ತವೆ. ಪ್ರತ್ಯೇಕ ಹಲಗೆಗಳ ತಮ್ಮ ತಮ್ಮ ಬಿಡಾರದಲ್ಲಿ ತಮ್ಮ ಜೊತೆಯೊಡನೆ ಚಪ್ಪಲಿಗಳು ಹಾಯಾಗಿದ್ದಾವೆ.

ಅಂಗಡಿಯವನಿಗೆ ಅವು ಹೊರಪ್ರಪಂಚವನ್ನು ಕಾಣುವುದಕ್ಕಿಂತ ಹೆಚ್ಚಾಗಿ ಹೊರಪ್ರಪಂಚ ಅವನ್ನು ಕಂಡರೆ ಸಾಕು.. ಅದಕ್ಕೆ ಈ ಗಾಜಿನ ಪೆಟ್ಟಿಗೆಯ ಅಲಂಕಾರ.. "ಮೂರ್ಖ ಚಪ್ಪಲಿಗಳೇ ಎದ್ದೇಳಿ.. ಹೊರಬನ್ನಿ.. ಕೂತಲ್ಲೇ ಕೊಳೆಯಬೇಡಿ.." ಚಪ್ಪಲಿಗಳು ನಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ.. ಅವು ಹೀಗೆ ಕೂಗುತ್ತಿವೆ: "ದೇವರೇ ಯಾವ ಗಿರಾಕಿಯೂ ತಮ್ಮನ್ನು ಕೊಳ್ಳದಿರಲಿ.. ನಾವಿಲ್ಲೇ ಇರುತ್ತೇವೆ"

ಸ್ವಲ್ಪ ದಿನವಾದ ಮೇಲೆ ಅವಕ್ಕೆ ಅನಿಸುತ್ತದೆ... ಪಕ್ಕದಲ್ಲೇ ಪ್ರತಿಯೊಂದಕ್ಕೂ ಅವರದೇ ಆದ ಜೊತೆಯಿದ್ದರೂ ಏನೋ ಒಂಟಿತನದ ಭಾವ ಕಾಡುತ್ತದೆ ..ಹೊರಗಿನ ಜಗತ್ತು ಫಳ ಫಳ ಹೊಳೆದಂತೆ ಭಾಸವಾಗುತ್ತದೆ.. ಗಾಜಿನ ಗೂಡಿನಲ್ಲಿ ಉಸಿರು ಕಟ್ಟಿದಂತಾಗಿ ಒಂದೇ ಸಮನೆ ಹೊರಹೋಗಬೇಕೆಂಬ ಬಯಕೆ ಕಾಡುತ್ತದೆ.. ಗಂಟೆ ರಾತ್ರಿ ಒಂಭತ್ತಾಗಿದೆ.. ಇನ್ನು ಅರ್ಧ ಗಂಟೆಯೊಳಗೆ ಅಂಗಡಿಯವ ಬಾಗಿಲು ಎಳೆಯುತ್ತಾನೆ.. ಅಷ್ಟರೊಳಗೆ ಸೇಲಾಗಿಬಿಟ್ಟರೆ ಈ ಗಾಜಿನ ಸೆರಮನೆಯಿಂದ ಬಿಡುಗಡೆಯಾಗಿಬಿಡಬಹುದಲ್ಲಾ ಎಂಬ ತವಕ ಅದು..

ಬಿಡುಗಡೆಯ ಕಲ್ಪನೆಯಲ್ಲಿ ಇರುವ ಸುಖವನ್ನು ನಿಜವಾದ ಬಿಡುಗಡೆಯಲ್ಲಿ ಕಾಣಲು ಅಸಾಧ್ಯ ಎಂಬುದು ಹೊರಬಂದ ಮೇಲೆ ಮಾತ್ರ ತಿಳಿಯುತ್ತದೆ.." ಮುಟ್ಟಾಳ ಚಪ್ಪಲಿಗಳೇ, ಹೊರಗೆ ಬರಬೇಡಿ.. ಹೊರಗಿರುವ ಕಲ್ಲು ಮುಲ್ಲುಗಳಲ್ಲಿ ನರಳುತ್ತೀರಿ" ಚಪ್ಪಲಿಗಳು ಇದನ್ನು ನಂಬುವುದಿಲ್ಲ... ಅವು ಹೀಗೆ ಕೂಗುತ್ತಿವೆ: "ದೇವರೇ ಯಾವುದೋ ಒಬ್ಬ ಗಿರಾಕಿ ಈಗಲೇ ನಮ್ಮನ್ನು ಕೊಳ್ಳಲಿ.. ನಾವು ಹೊರಗೆ ಬರುತ್ತೇವೆ"

ಚಪ್ಪಲಿಗಳಿನ್ನೂ ದ್ವಂದ್ವದಲ್ಲಿವೆ..